ಚಕ್ರವರ್ತಿ ಅಂಬಿಕಾ

1802-1962. ಭಾರತದ ಒಬ್ಬ ಕ್ರಾಂತಿವೀರ. 1892ರಲ್ಲಿ ಬರ್ಮದಲ್ಲಿ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. ತಂದೆ ನಂದಕುಮಾರ್ ಚಕ್ರವರ್ತಿ. ಇವರು ತಮ್ಮ ಸಂಸಾರದೊಂದಿಗೆ ಈಗಿನ ಬಾಂಗ್ಲಾದೇಶದ ಚಿತ್ತಗಾಂಗ್‍ನಲ್ಲಿ ನೆಲಸಿದ್ದರಿಂದ ಅಂಬಿಕಾ ಚಕ್ರವರ್ತಿ ಅಲ್ಲೇ ಬೆಳೆದರು. ಇವರು ಹೆಚ್ಚು ವಿದ್ಯಾಭ್ಯಾಸ ಮಾಡಲಿಲ್ಲ.
ಚಿಕ್ಕಂದಿನಲ್ಲಿ ಇವರು ಬಂಗಾಲದಲ್ಲಿ ಹಬ್ಬಿದ್ದ ಕಾಂಗ್ರೆಸ್ಸಿನ ಸ್ವದೇಶಿ ಚಳವಳಿಯಲ್ಲಿ ಭಾಗವಹಿಸಿದರು. ಆ ಸಮಯದಲ್ಲಿ ಇವರು ಚಿತ್ತಗಾಂಗಿನ ಕಾಂಗ್ರೆಸ್ ಮುಂದಾಳಾಗಿದ್ದ ಜೆ.ಎಂ. ಸೇನ್ ಗುಪ್ತರಿಂದ ಪ್ರಭಾವಿತರಾದರು. ವಿವೇಕಾನಂದರ ಬರಹಗಳೂ ಕ್ಷುಧಿರಾಂ, ಪ್ರಫುಲ್ಲ ಚಾಕಿ ಮುಂತಾದವರ ಜೀವನ ಚರಿತ್ರೆಗಳೂ ಇವರ ಮೇಲೆ ತುಂಬ ಪರಿಣಾಮ ಉಂಟುಮಾಡಿದುವು. ದೇಶದ ಬಿಡುಗಡೆಗಾಗಿ ಜೀವನವನ್ನು ಮುಡಿಪಾಗಿಡಲು ಸಂಕಲ್ಪಿಸಿ ಆಜೀವ ಬ್ರಹ್ಮಚರ್ಯವನ್ನು ಅನುಸರಿಸಿದರು. 1911-12ರಲ್ಲಿ ಇವರಿಗೆ ಸೇನ್ ಗುಪ್ತ ಸಂಪರ್ಕ ಲಭಿಸಿ ಇವರು ಕಾಂಗ್ರೆಸ್ ಸೇರಿದರು. ಸೇನ್ ಗುಪ್ತರ ನಾಯಕತ್ವದಲ್ಲಿ ಇವರು ಚಾಂದ್‍ಪುರ ಕಾರ್ಮಿಕ ಮುಷ್ಕರದಲ್ಲೂ ಅಸ್ಸಾಂ-ಬಂಗಾಲ ರೈಲ್ವೆ ಮುಷ್ಕರದಲ್ಲೂ ಭಾಗವಹಿಸಿದ್ದರು. ಇದೇ ಕಾಲದಲ್ಲೇ ಕಾಂಗ್ರೇಸ್ ಚಳವಳಿಯಲ್ಲಿ ಭಾಗವಹಿಸಿದ್ದ ಸೂರ್ಯ ಸೇನರ ಭೇಟಿಯಾದ ಮೇಲೆ ಇವರ ಜೀವನದಲ್ಲೊಂದು ಮಹಾ ಪರಿವರ್ತನೆಯುಂಟಾಯಿತು. ಇವರೊಬ್ಬ ಕ್ರಾಂತಿಕಾರಿಯಾಗಿ ಚಿತ್ತಗಾಂಗಿನ ಕ್ರಾಂತಿಕಾರಿಗಳ ಗುಂಪಿಗೆ ನಾಯಕರಾದರು. ಆದರೆ ಕಾಂಗ್ರೇಸ್ಸಿನೊಂದಿಗೆ ಸಂಬಂಧವನ್ನು ಕಡಿದುಕೊಳ್ಳಲಿಲ್ಲ. ಚಿತ್ತಗಾಂಗ್ ಜಿಲ್ಲೆಯ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರೂ ಆಗಿದ್ದರು.

ಕ್ರಾಂತಿಯೋಧರ ಸಂಗ್ರಹ, ತರಬೇತು, ಶಸ್ತ್ರಸಂಗ್ರಹಣೆ ಮುಂತಾದ ಕಾರ್ಯಗಳಲ್ಲಿ ಇವರು ನಿರತರಾದರು. ಹಣ ಎತ್ತಲು ದರೋಡೆ ಮಾಡಿದರು. 1924ರಲ್ಲಿ ಇವರು ಬಂಧನಕ್ಕೊಳಗಾಗಿ ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿದ್ದರು. ಬಿಡುಗಡೆಯಾದ ಮೇಲೆ ಇವರು ಸುಭಾಷ್‍ಚಂದ್ರ ಬೋಸರ ಅನುಯಾಯಿಯಾದರು. ಕಾಂಗ್ರೆಸಿನ ಮುಸುಕಿನಲ್ಲಿ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸುವುದು ಇವರ ಉದ್ದೇಶವಾಗಿತ್ತು.

ಸೂರ್ಯ ಸೇನ್ ಮತ್ತು ನಿರ್ಮಲ್ ಸೇನ್ ಅವರೊಡನೆ ಸೇರಿ ಇವರು ಚಿತ್ತಗಾಂಗ್ ವಿಮೋಚನೆಗಾಗಿ ಸಾಹಸದ ಯೋಜನೆಯೊಂದನ್ನು ಹಾಕಿಕೊಂಡರು. 1930ರಲ್ಲಿ ಏಪ್ರಿಲ್ 18ರಂದು ಇವರ ನಾಯಕತ್ವದ ಒಂದು ತುಕಡಿ ಅಲ್ಲಿಯ ದೂರವಾಣಿ ಮತ್ತು ತಂತಿ ಕಚೇರಿಗಳನ್ನು ವಶಪಡಿಸಿಕೊಂಡಿತು. ಇನ್ನೊಂದು ತುಕಡಿ ಶಸ್ತ್ರಾಗಾರವನ್ನು ವಶಪಡಿಸಕೊಂಡಿತು. ಆದರೆ ಅಲ್ಲಿ ನಿರೀಕ್ಷಿಸಿದಂತೆ ತೋಟಾಗಳು ಸಿಕ್ಕಲಿಲ್ಲವಾದ್ದರಿಂದ ಇವರಿಗೆ ನಿರಾಶೆ ಕಾದಿತ್ತು. ಕ್ರಾಂತಿಕಾರಿ ಚಟುವಟಿಕೆಗಳ ಸಂಯೋಜನಾ ನೆಲೆಯಾಗಿ ನಿರ್ಧರಿಸಲಾಗಿದ್ದ ಜಲಾಲಾಬಾದ್ ಬೆಟ್ಟಕ್ಕೆ ಇವರು ತಮ್ಮ ಯೋಧರನ್ನು ಕರೆದೊಯ್ದರು. ಆದರೆ ಇವರ ಯೋಜನೆ ಫಲಿಸಲಿಲ್ಲ. ಏಪ್ರಿಲ್ 22ರಂದು ಅಲ್ಲಿಗೆ ಬಂದ ಸರ್ಕಾರದ ಭಾರಿ ಪಡೆಯೊಂದಿಗೆ ಹೋರಾಟದಲ್ಲಿ ಅಂಬಿಕಾ ಚಕ್ರವರ್ತಿಯ ಎದೆಗೆ ಗುಂಡು ತಗುಲಿತು. ತಮ್ಮ ಅನುಯಾಯಿಗಳೊಂದಿಗೆ ಇವರು ತಪ್ಪಿಸಿಕೊಳ್ಳಲಾಗಲಿಲ್ಲವಾದರೂ ಸರ್ಕಾರಿ ಪಡೆಗೆ ಸಿಕ್ಕದೆ ತೆವಳಿಕೊಂಡು ನೆರೆಯ ಗ್ರಾಮಕ್ಕೆ ಸೇರಿ, ಅಲ್ಲಿಯವರ ಸಹಾಯದಿಂದ ತಲೆತಪ್ಪಿಸಿಕೊಂಡು ಭೂಗತರಾದರು. 1930ರಲ್ಲಿ ಇವರ ದಸ್ತಗಿರಿಯಾಯಿತು. ಇವರಿಗೆ ಜೀವಾವಧಿ ಶಿಕ್ಷೆಯಾಯಿತು. ಇವರನ್ನು ಅಂಡಮಾನಿಗೆ ರವಾನಿಸಲಾಯಿತು.

ಅಂಡಮಾನಿನಲ್ಲಿದ್ದಾಗ ಇವರು ಮಾಕ್ರ್ಸಿಸ್ಟ್ ಸಾಹಿತ್ಯದಿಂದ ತುಂಬ ಪ್ರಭಾವಿತರಾದರು. 1946ರಲ್ಲಿ ಬಿಡುಗಡೆ ಹೊಂದಿದಾಗ ಇವರ ಕಮ್ಯೂನಿಸ್ಟ್ ಪಕ್ಷ ಸೇರಿ ಕೊನೆಯವರೆಗೂ ಅದರ ಸದಸ್ಯರಾಗಿದ್ದರು. ಜನತಾ ವೀರನೆಂಬ ಖ್ಯಾತಿ ಇವರಿಗೆ ಬಂದಿತ್ತು. 1948ರಲ್ಲಿ ಕಮ್ಯೂನಿಸ್ಟ್ ಪಕ್ಷ ಬಹಿಷ್ಕøತವಾದಾಗ ಇವರು ಭೂಗತರಾಗಿದ್ದರು. 1949ರಲ್ಲಿ ಇವರು ಬಂಧನಕ್ಕೊಳಗಾಗಿ 1951ರಲ್ಲಿ ಬಿಡುಗಡೆಯಾದರು. ಭಾರತೀಯ ಕಮ್ಯೂನಿಸ್ಟ್ ಪಕ್ಷದ ಪಶ್ಚಿಮ ಬಂಗಾಲದ ಪ್ರಾಂತೀಯ ಸಮಿತಿಯ ಸದಸ್ಯರಾದರು. ಭಾರತ ವಿಭಜನೆಯ ಅನಂತರ ಕಲ್ಕತೆಗೆ ಬರುತ್ತಿದ್ದ ನಿರಾಶ್ರಿತರ ಪುನರ್ವಸತಿಯ ಕೆಲಸದಲ್ಲಿ ಇವರು ವಹಿಸಿದ ಪಾತ್ರ ಮುಖ್ಯವಾದ್ದು, 1952ರಲ್ಲಿ ಪಶ್ಚಿಮ ಬಂಗಾಲದ ವಿಧಾನಸಭೆಗೆ ಕಮ್ಯೂನಿಸ್ಟ್ ಅಭ್ಯರ್ಥಿಯಾಗಿ ಇವರು ಆಯ್ಕೆಗೊಂಡರು. ಆದರೆ 1957ರ ಚುನಾವಣೆಯಲ್ಲಿ ಇವರಿಗೆ ಪರಾಜಯವಾಯಿತು. 1962ರ ಮಾರ್ಚ್ 6ರಂದು ಕಾರೊಂದು ಇವರ ಮೇಲೆ ಹರಿದ ಪರಿಣಾಮವಾಗಿ ಇವರು ನಿಧನ ಹೊಂದಿದರು.

ಅಂಬಿಕಾ ಚಕ್ರವರ್ತಿ ಧೈರ್ಯಶಾಲಿ, ಮಿತಭಾಷಿ. ಕೊನೆಯವರೆಗೂ ಇವರು ಉಜ್ಜ್ವಲಕ್ರಾಂತಿಯಾಗಿಯೇ ಉಳಿದರು. ಇವರು ಒಳ್ಳೆಯ ಭಾಷಣಕಾರರಾಗಲಿ ಬುದ್ಧಿಜೀವಿಯಾಗಲಿ ಆಗಿರದಿದ್ದರೂ ಜನರ ನಡುವೆ ಸದಾ ಕಾರ್ಯನಿರತರಾಗಿದ್ದು ಅವರ ಪ್ರೀತಿ ಗೌರವಗಳಿಗೆ ಭಾಜನರಾಗಿದ್ದರು.									*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ